ಮಾಹಿತಿ ಸಂಸ್ಕರಣೆ  -
	ತೆರಿಗೆ ಪಾವತಿ, ರೈಲು ಪ್ರಯಾಣ ಟಿಕೆಟ್ ಖರೀದಿ, ಕೈಗಾರಿಕೆಗೆ ಕಚ್ಚಾವಸ್ತು ಖರೀದಿ, ಬ್ಯಾಂಕಿನ ಖಾತೆ ಹಣ ಜಮಾ ಮಾಡುವುದು, ಹೀಗೆ ದೈನಂದಿನ ವ್ಯವಹಾರದಲ್ಲಿ ವಿವಿಧ ರೀತಿಯಲ್ಲಿ ಮಾಹಿತಿ ವಿನಿಮಯ ನಡೆಯುತ್ತದೆ. ಈ ಮಾಹಿತಿಯನ್ನು ಗಣಕ ಮತ್ತು ಸೂಕ್ತ ಸಾಫ್‍ವೇರ್ ನೆರವಿನಿಂದ ಕ್ರೋಢಿಕರಿಸಿ, ಪರಿಷ್ಕರಣೆ ನಡೆಸಿ ಉಪಯುಕ್ತ ಮಾಹಿತಿಯನ್ನಾಗಿ ಪರಿವರ್ತಿಸುವ ವಿಧಾನಕ್ಕೆ ಮಾಹಿತಿ ಸಂಸ್ಕರಣೆ ಅಥವಾ ಡೇಟಾ ಪ್ರೋಸೆಸಿಂಗ್ ಎಂದು ಹೇಳಲಾಗುತ್ತದೆ. ಮಾಹಿತಿ ಸಂಸ್ಕರಣೆಯಲ್ಲಿ ಮಾಹಿತಿಯನ್ನು ಗುಣಿಸುವುದು, ಹೋಲಿಕೆ ಮಾಡುವುದು, ವಿಂಗಡಿಸುವುದು ಹೀಗೆ ಹಲವು ರೀತಿಯಲ್ಲಿ ಮಾಹಿತಿ ಸಂಸ್ಕರಣೆ ನಡೆಯುತ್ತದೆ.

	ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ, ಧ್ವನಿ, ಅಕ್ಷರ, ದೃಶ್ಯ ಮತ್ತು ಡಿಜಿಟಲ್ ಸ್ವರೂಪದಲ್ಲಿರುವ ಮಾಹಿತಿಯನ್ನು ಮಾಹಿತಿ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ. ಮಾಹಿತಿ ಸಂಸ್ಕರಣೆಯಾದ ನಂತರ ಅದನ್ನು ಗಣಕದಲ್ಲಿ ಬಳಸಬಹುದು, ಪ್ರಿಂಟರ್ ಬಳಸಿ ಮುದ್ರಿಸಬಹುದು, ನೆಟ್‍ವರ್ಕ್ ಅಥವಾ ಇಂಟರ್‍ನೆಟ್ ಮೂಲಕ ಬೇರೆಯವರಿಗೆ ನೀಡಬಹುದು, ಹೀಗೆ ವಿವಿಧ ರೀತಿಯಲ್ಲಿ ಮಾಹಿತಿ ಬಳಸಲಾಗುತ್ತದೆ.

ಮಾಹಿತಿ ಸಂಗ್ರಹ ಮತ್ತು ಕ್ರೋಡಿಕರಣ ವ್ಯವಸ್ಥೆ

ಮಾಹಿತಿ ಸಂಸ್ಕರಣೆ ಯಶಸ್ವಿಯಾಗಲು, ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಇವುಗಳೆಂದರೆ;

ಅ) ಮಾಹಿತಿಯನ್ನು ಕ್ರೋಡಿಕರಿಸಿ, ಪರಿಷ್ಕರಿಸಿ ಮತ್ತು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿಡಲು ಸಾಧ್ಯವಿರಬೇಕು.
ಆ) ಮಾಹಿತಿಯ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡಲು ಸಾಧ್ಯವಿರಬೇಕು. 
ಇ) ಮಾನವನಿಗೆ ಸುಲಭವಾಗಿ ಬಳಸಲು ಸಾಧ್ಯವಾಗುವಂತಹ ರೀತಿಯಲ್ಲಿ ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಿರಬೇಕು.
ಮಾಹಿತಿ ಸಂಸ್ಕರಣೆಗಾಗಿ ಎರಡು ಪ್ರಮುಖ ವಿಧಾನಗಳನ್ನು ಬಳಸಲಾಗುತ್ತದೆ. ಅವುಗಳೆಂದರೆ; 
ಅ) ಫೈಲ್ ಅಥವಾ ಕಡತ ಸಂಸ್ಕರಣೆ ವಿಧಾನ
ಆ) ಡೇಟಾಬೇಸ್ ಸಂಸ್ಕರಣೆ ವಿಧಾನ

ಕಡತ ಸಂಸ್ಕರಣೆ ವಿಧಾನದಲ್ಲಿ ಮಾಹಿತಿಯನ್ನು ಸಂಸ್ಕರಿಸಿ, ಗಣಕದಲ್ಲಿ ಪ್ರತ್ಯೇಕ ಕಡತಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಕಡತ ಸಂಸ್ಕರಣೆ ವಿಧಾನದಲ್ಲಿ ಎರಡು ವಿಧವಿದೆ;
ಅ) ಅನುಕ್ರಮ (Sequeಟಿಣiಚಿಟ) ಕಡತ ಸಂಸ್ಕರಣೆ ವಿಧಾನ
ಆ) ನೇರ (ಆiಡಿeಛಿಣ) ಕಡತ ಸಂಸ್ಕರಣೆ ವಿಧಾನ

	ಅನುಕ್ರಮ ಕಡತ ಸಂಸ್ಕರಣೆ ವಿಧಾನದಲ್ಲಿ, ಗಣಕದ ಟೇಪ್ ಸಂಗ್ರಹ ಅಥವಾ ಹಾರ್ಡ್ ಡಿಸ್ಕ್‍ನಿಂದ ಅಗತ್ಯವಾದ ಕಡತಗಳನ್ನು ನಿರ್ದಿಷ್ಟ ಅನುಕ್ರಮದಂತೆ ಪಡೆದು, ವಿಂಗಡಿಸಿ ನಂತರ ಮಾಹಿತಿ ಸಂಸ್ಕರಣೆ ಮಾಡಲಾಗುತ್ತದೆ. ಮಾಹಿತಿ ಸಂಸ್ಕರಣೆ ವಿವಿಧ ಹಂತದಲ್ಲಿ ನಡೆಯುವ ಅಗತ್ಯವಿರುವಾಗ, ಅನುಕ್ರಮ ಕಡತ ಸಂಸ್ಕರಣೆ ವಿಧಾನವನ್ನು ಬಳಸಬಹುದಾಗಿದೆ. ಉದಾ: ನೌಕರರ ವೇತನ ಪಟ್ಟಿಯನ್ನು ಸಿದ್ಧಪಡಿಸುವುದು.

	ನೇರ ಕಡತ ಸಂಸ್ಕರಣೆ ವಿಧಾನವನ್ನು, ನಿರ್ದಿಷ್ಟ ಕಡತವನ್ನು ಪಡೆದು, ಅದರಲ್ಲಿರುವ ಮಾಹಿತಿ ಸಂಸ್ಕರಣೆ ನಡೆಸಬೇಕಾದ ಸಂದರ್ಭದಲ್ಲಿ ಬಳಸಬಹುದಾಗಿದೆ. ಉದಾಹರಣೆಗೆ, ಗ್ರಾಹಕನು ಕ್ರೆಡಿಟ್ ಕಾರ್ಡ್ ಬಳಸಿ, ಖರೀದಿ ಮಾಡುವ ಸಂದರ್ಭದಲ್ಲಿ, ವರ್ತಕನು ಬ್ಯಾಂಕನ್ನು ಸಂಪರ್ಕಿಸಿ ಅತ್ಯಂತ ಕಡಿಮೆ ಸಮಯದಲ್ಲಿ, ಗ್ರಾಹಕನ ಕ್ರೆಡಿಟ್ ಕಾರ್ಡ್ ಚಲಾವಣೆಯಲ್ಲಿ ಇರುವುದೋ ಇಲ್ಲವೋ, ಗ್ರಾಹಕನಿಗೆ ಬ್ಯಾಂಕು ನೀಡಿರುವ ಕ್ರೆಡಿಟ್ ಮಿತಿಯಷ್ಟು, ಹೀಗೆ ಹಲವು ವಿಷಯಗಳನ್ನು ಪಡೆಯಬೇಕಾಗುತ್ತದೆ. ಈ ಮಾಹಿತಿಯು, ಗ್ರಾಹಕನಿಗೆ ಸಂಬಂಧಿಸಿದ ಕಡತದಲ್ಲಿ, ಬ್ಯಾಂಕಿನ ಗಣಕ ಜಾಲದಲ್ಲಿರುತ್ತದೆ. ಇದೇ ಕಡತವನ್ನು ಶೀಘ್ರವಾಗಿ ಗುರುತಿಸಲು iಟಿಜexiಟಿg ವಿಧಾನವನ್ನು ಬಳಸಲಾಗುತ್ತದೆ.

	ಕಡತಗಳ ಸಂಖ್ಯೆ ಕಡಿಮೆ ಇರುವಾಗ ಮತ್ತು ಸೀಮಿತ ಮಾಹಿತಿ ಸಂಸ್ಕರಣೆ ನಡೆಯಬೇಕಾದಾಗ ಕಡತ ಸಂಸ್ಕರಣೆ ವಿಧಾನ ಬಳಸಬಹುದಾಗಿದೆ. ಆದರೆ, ಈಗ ಮಾಹಿತಿ ಸಂಸ್ಕರಣೆಗಾಗಿ, ಹೆಚ್ಚಾಗಿ ಡೇಟಾಬೇಸ್ ಸಂಸ್ಕರಣೆ ವಿಧಾನವನ್ನು ಬಳಸಲಾಗುತ್ತದೆ.

ಡೇಟಾಬೇಸ್ ಸಂಸ್ಕರಣೆ ವಿಧಾನ:

	ಗಣಕದಲ್ಲಿ ಮಾಹಿತಿಯನ್ನು ಕ್ರೋಡಿಕರಿಸಲು, ಸಂಸ್ಕರಿಸಲು ಮತ್ತು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಲು ಡೇಟಾಬೇಸ್ ತಂತ್ರಜ್ಞಾನ ಉಪಯುಕ್ತವಾಗಿದೆ. ಸರಳ ರೀತಿಯಲ್ಲಿ ಡೇಟಾ ಬೇಸ್‍ನ್ನು ಅರ್ಥ ಮಾಡಿಕೊಳ್ಳಲು, ಆಧುನಿಕ ಗ್ರಂಥಾಲಯದ ಉದಾಹರಣೆಯನ್ನು ನೋಡೋಣ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು, ವಿವಿಧ ವಿಭಾಗಗಳಿಗೆ ಅನ್ವಯವಾಗುವಂತೆ ವಿಂಗಡಿಸಿ ಜೋಡಿಸಿರುತ್ತಾರೆ. ನಿರ್ದಿಷ್ಟ ಕ್ರಮಸಂಖ್ಯೆ, ಅದು ಗ್ರಂಥಾಲಯವನ್ನು ಸೇರಿದ ದಿನ, ಪ್ರಕಾಶಕ ಮತ್ತು ಲೇಖಕರ ಮಾಹಿತಿ ಹೀಗೆ ಪ್ರತಿಯೊಂದು ಪುಸ್ತಕಕ್ಕೆ iಟಿಜex ಮಾಡಲಾಗಿರುತ್ತದೆ. ಪುಸ್ತಕಗಳ ಎರುವಲು ನೀಡಿಕೆ, ಮರಳಿ ಪಡೆಯುವಿಕೆ, ಹೊಸ ಪುಸ್ತಕಗಳ ಸೇರ್ಪಡೆ, ಹೀಗೆ ಪ್ರತಿಯೊಂದು ಚಟುವಟಿಕೆಯೂ ನಿರ್ದಿಷ್ಟ ನಿಯಮಗಳಿಗನುಗುಣವಾಗಿ ನಡೆಯುವುದರಿಂದ, ಗ್ರಂಥಾಲಯ ಸುಲಲಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

	ಇದೇ ರೀತಿ, ಡೇಟಾಬೇಸ್‍ನಲ್ಲಿ ಕಡತಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡಲಾಗುತ್ತದೆ. ನಿರ್ದಿಷ್ಟ ನಿಯಮಗಳಿಗನುಗುಣವಾಗಿ ಡೇಟಾ ಬೇಸ್ ನಿರ್ವಹಣೆ ನಡೆಯುತ್ತದೆ. ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ (ಆಃಒS) ಸಾಫ್ಟ್‍ವೇರ್, ಕಡತಗಳಿಗೆ ಸಂಬಂಧಿಸಿದಂತೆ ರೆಕಾರ್ಡುಗಳು ಮತ್ತು ಟೇಬಲ್‍ಗಳು, ಅವುಗಳ ನಡುವಿನ ಸಂಬಂಧಗಳು, ಡೇಟಾಬೇಸ್ ಮಾಹಿತಿ ಸಂಸ್ಕರಣೆ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

	ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಹೊಸ ಸಂಶೋಧನೆಗಳಿಂದಾಗಿ ಮತ್ತು ಹೊಸ ಸಾಫ್ಟ್‍ವೇರ್‍ಗಳ ಅಭಿವೃದ್ಧಿಯಿಂದಾಗಿ, ಡೇಟಾಬೇಸ್ ಸಂಸ್ಕರಣೆ ವಿಧಾನ ಬಳಸಿ, ಅಗಾಧ ಪ್ರಮಾಣದ ಮಾಹಿತಿಯನ್ನು ಯಶಸ್ವಿಯಾಗಿ ಸಂಸ್ಕರಣೆ ಮಾಡಲು ಸಾಧ್ಯವಾಗಿದೆ. ಈ ವಿಧಾನದಲ್ಲಿ, ಮಾಹಿತಿಯ ವಿಶ್ವಾಸಾರ್ಹತೆ, ಗುಣಮಟ್ಟ ಮತ್ತು ಸುರಕ್ಷಿತೆಯನ್ನು ಕಾಪಾಡಿಕೊಂಡು, ಕಡಿಮೆ ಸಮಯದಲ್ಲಿ ಮಾಹಿತಿ ಸಂಸ್ಕರಣೆ ಸಾಧ್ಯವಾಗಿರುವುದರಿಂದ, ಡೇಟಾಬೇಸ್ ಸಂಸ್ಕರಣೆ ವಿಧಾನ ಹೆಚ್ಚಾಗಿ ಬಳಕೆಯಲ್ಲಿದೆ.
(ಉದಯ ಶಂಕರ ಪುರಾಣಿಕ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ